ಎಲ್ಗಿನ್, ಲಾರ್ಡ್1: 1811-63. ಸ್ಕಾಟ್ಲೆಂಡಿನ ಎಲ್ಗಿನ್ ಮತ್ತು ಕಿಂಕಾರ್ಡೀನ್ ಅರ್ಲ್ಗಳ (ಶ್ರೀಮಂತರ) ಸಾಲಿನಲ್ಲಿ ಎಂಟನೆಯವ; ಜೇಮ್ಸ್‌ ಇವನ ಸ್ವಂತನಾಮ. ಈತ ಸಮರ್ಥ ಆಡಳಿತಗಾರ. ಲಾರ್ಡ್ ಕ್ಯಾನಿಂಗ್ನ ತರುವಾಯ ಭಾರತದ ವೈಸರಾಯ್ ಆಗಿದ್ದ (ಮಾರ್ಚ್ 1862-ನವೆಂಬರ್ 1863). ಮುಂದೆ ಇವನ ಮಗನೂ ಭಾರತದ ವೈಸರಾಯಿಯಾದ್ದರಿಂದ ಈತನನ್ನು 1ನೆಯ ಲಾರ್ಡ್ ಎಲ್ಗಿನ್ ಎಂದು ಕರೆಯಲಾಗಿದೆ. ಲಂಡನಿನಲ್ಲಿ ಜನಿಸಿ, ಈಟನಿನಲ್ಲೂ ಕ್ರೈಸ್ಟ್‌ ಚರ್ಚ್ ಕಾಲೇಜಿನಲ್ಲೂ ವಿದ್ಯೆಗಳಿಸಿದ. ಈತ ಗ್ಲಾಡ್ಸ್ಟನನ ಸಮಕಾಲೀನ. ಸರ್ ರಾಬರ್ಟ್ ಪೀಲ್ ಬ್ರಿಟನಿನ ಪ್ರಧಾನ ಮಂತ್ರಿಯಾಗಿದ್ದಾಗ ಜಮೈಕದ ಗವರ್ನರ್ ಆಗಿ ನೇಮಕವಾದ (1842). ಗುಲಾಮಗಿರಿ ರದ್ದಾಗಿದ್ದದ್ದರಿಂದ ಅಲ್ಲಿ ಉದ್ಭವಿಸಿದ್ದ ವಿಶೇಷ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ಆಡಳಿತ ನಿರ್ವಹಿಸಿ, ನೀಗ್ರೋಗಳ ಬಾಳು ಉತ್ತಮಗೊಳಿಸುವ ಕ್ರಮ ಕೈಗೊಂಡ.

1846ರಲ್ಲಿ ಕೆನಡದ ಗವರ್ನರ್ ಜನರಲ್ ಹುದ್ದೆ ಈತನಿಗೆ ದೊರಕಿತು. ಅಲ್ಲೂ ಉತ್ತಮ ವಾತಾವರಣವಿರಲಿಲ್ಲ. ಅಲ್ಲಿನ ಬ್ರಿಟಿಷ್ ಹಾಗೂ ಫ್ರೆಂಚ್ ನಿವಾಸಿಗಳ ನಡುವೆ ವೈರ ಬೆಳೆದಿತ್ತು. ಅವರ ಸ್ವಾತಂತ್ರ್ಯಾಕಾಂಕ್ಷೆಯನ್ನೂ ಕಡೆಗಣಿಸುವಂತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈತ ತಳೆದ ಸಹಾನುಭೂತಿಯುತ ಧೋರಣೆಯಿಂದಾಗಿ ಅಲ್ಲೂ ಒಳ್ಳೆಯ ಹೆಸರು ಪಡೆದ. ಎಲ್ಗಿನಿನ ಬ್ಯಾರನ್ ಪದವಿ ಈತನಿಗೆ ಲಭ್ಯವಾಯಿತು.

1855ರಲ್ಲಿ ಲಾರ್ಡ್ ಪಾಮರ್ಸ್ಟನನ ಸರ್ಕಾರದಲ್ಲಿ ಇವನಿಗೆ ಸಚಿವನಾಗುವ ಅವಕಾಶವಿತ್ತು. ಆದರೆ ಆ ಆಹ್ವಾನವನ್ನು ಈತ ನಿರಾಕರಿಸಿದ. ಮುಂದೆ ಚೀನದಲ್ಲಿ ಸಂಭವಿಸಿದ ದುರ್ಘಟನೆಯಿಂದಾಗಿ ಅಲ್ಲಿಗೆ ಸೈನ್ಯದೊಂದಿಗೆ ಹೊರಟ. ನಡುವೆ ಭಾರತದ ಕರೆ ಬಂತು. ಆಗ ವೈಸ್ರಾಯಿಯಾಗಿದ್ದ ಲಾರ್ಡ್ ಕ್ಯಾನಿಂಗ್ ಈತನ ಮಿತ್ರ . 1857ರ ಬಂಡಾಯವನ್ನಡಗಿಸಲು ಅವನ ನೆರವಿಗೆ ಈತನ ಸೇನೆ ಧಾವಿಸಿತು. ಅನಂತರ ಈತ ಚೀನ-ಜಪಾನುಗಳೊಂದಿಗೆ ಚೌಕಾಷಿ ಮಾಡಿ ಬ್ರಿಟಿಷರಿಗೆ ನಾನಾ ಸವಲತ್ತುಗಳನ್ನು ಗಿಟ್ಟಿಸಿಕೊಂಡ. ಇವನ ಸಾಮ್ರಾಜ್ಯಷಾಹಿ ಮನೋಭಾವ ಬಂiÀÄಲಿಗೆ ಬಂದದ್ದು ಆಗ.

ಆ ವೇಳೆಗೆ ಭಾರತದ ಆಡಳಿತ ಈಸ್ಟ್‌ ಇಂಡಿಯ ಕಂಪನಿಯಿಂದ ಬ್ರಿಟಿಷ್ ಸರ್ಕಾರದ ವಶಕ್ಕೆ ಬಂದಿತ್ತು. 1858ರ ಕಾಯಿದೆಗೆ ಅನುಗುಣವಾಗಿ ಬ್ರಿಟಿಷ್ ಸರ್ಕಾರದಿಂದ ನೇರವಾಗಿ ನೇಮಕಗೊಂಡ ಪ್ರಥಮ ವೈಸರಾಯ್ ಈತ. ಹೊಸ ವ್ಯವಸ್ಥೆಯನ್ನು ಊರ್ಜಿತಗೊಳಿಸುವ ಕೆಲಸದಲ್ಲಿ ಈತ ಉದ್ಯುಕ್ತನಾಗಿದ್ದ. ವಾಯವ್ಯ ಗಡಿನಾಡಿನಲ್ಲಿ ಎದ್ದ ದಂಗೆಯನ್ನಡಗಿಸುವ ಕಾರ್ಯದಲ್ಲಿ ಇವನ ಸಜ್ಜಾದ ಉಕ್ಕಿನ ಕೈಮುಂದಾಯಿತು. ಎಂಟು ತಿಂಗಳ ವೈಸರಾಯ್ಗಿರಿಯಲ್ಲಿನ ದೊಡ್ಡ ಘಟನೆಯೆಂದರೆ ಇದೊಂದೇ. ಭಾರತದಲ್ಲಿ ಇವನ ಆಡಳಿತದ ಬಣ್ಣದ ಅರಿವಾಗುವ ಮುನ್ನವೇ ಈತ ಹೃದಯಾಘಾತದಿಂದ ನಿಧನನಾದ. ಧರ್ಮಶಾಲಾದಲ್ಲಿ ಈತನ ದೇಹವನ್ನು ಹೂಳಲಾಯಿತು. (ಬಿ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ